ಆ ಕಾಲದಲ್ಲಿ ನಮ್ಮ ಕೆನರಾ ಜಿಲ್ಲೆಯು ಮುಂಬೈ ಪ್ರಾಂತದಲ್ಲಿದ್ದು, ಬ್ರಿಟಿಷರು ಮುಂಬೈಯಿಂದಲೇ ಆಡಳಿತ ನಡೆಸುತ್ತಿದ್ದರು. ಸ್ವಾತಂತ್ರ್ಯದ ನಂತರವೂ ಅಂದರೆ ಭಾಷಾವಾರು ಪ್ರಾಂತ ಪುನರ್ ರಚನೆ ಆಗುವವರೆಗೆ ಅಂದರೆ 1956 ರ ವರೆಗೆ, ನಾವು ಅಲ್ಲಿನ ಆಡಳಿತಕ್ಕೆವೊಳಪಟ್ಟಿದ್ದೆವು. ನಂತರ ನಾವು ಮೈಸೂರು ರಾಜ್ಯದಲ್ಲಿ ಸೇರಿದೆವು.
ಕೊಂಕಣಿ ಮಾತ್ರಭಾಷೆ ಹೊಂದಿದ ಹೆಚ್ಚಿನವರು ಮೊದಲಿನಿಂದಲೂ ನೌಕರಿ ಮತ್ತು ಅವರ ಕಸುಬಿಗಾಗಿ ಮುಂಬೈ, ಪೂನಾದಲ್ಲಿ ನೆಲೆಸಿದ್ದರು. ಅವರ ಮೂಲ ನೆಲ ಅಂಕೋಲಾದಲ್ಲಿ ಪಿತ್ರಾರ್ಜಿತ ಮನೆಯ ದೇಖರೇಖೆಯು ಹಾಗೂ ಕೃಷಿ, ಧಾರ್ಮಿಕ ಕಾರ್ಯಕ್ರಮ ನಿರ್ವಹಣೆಯು ಇಲ್ಲಿ ವಾಸಿಸುವ ಅವರ ಒಂದು ಕವಲಿನ ಕುಟುಂಬದ ಮೇಲಿತ್ತು. ಹೀಗೆ ಅವಿಭಕ್ತ ಕುಟುಂಬದ ಒಂದೆರಡು ಕವಲಿನವರು ಇಲ್ಲಿಯೇ ಸ್ಥಾಯಿಯಾಗಿದ್ದರು. ವರ್ಷದಲ್ಲಿ ವೊಂದೆರಡುಬಾರಿ ಮುಂಬೈ ಹಾಗೂ ಅಂಕೋಲೆಯ ಕುಟುಂಬದವರು ಮದುವೆ, ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ, ದೇವರಿಗೆ ಹರಿಕೆ ವಗೈರೆ ಸಲ್ಲಿಸುವದಿದ್ದಲ್ಲಿ, ಇಶಾಡ್ ಮಾವಿನ ಹಾಗೂ ಗೇರುಬೀಜದ ಸೀಜನನಲ್ಲಿ, ಬಂಡಿ ಹಬ್ಬದ ಸಂದರ್ಭದಲ್ಲಿ ಸಮ್ಮಿಳಿತವಾಗಿ, ಕುಟುಂಬಸಮೇತ ಬಂದು ಮೀನು, ಕೋಳಿ ಸವಿಯುತ್ತಿದ್ದರು ಹಾಗೂ ಊರಿನವರಿಗೆ ಆ ಕುಟುಂಬದ ಏಕತೆಯನ್ನು ಪ್ರದರ್ಶಿಸುತ್ತ ಮಜಾ ಅನುಭವಿಸುತ್ತಿದ್ದರು. ವಿಶೇಷವಾಗಿ ಏಪ್ರಿಲ್ – ಮೇ ತಿಂಗಳ ರಜೆಯಲ್ಲಿ ಅವರು ಬರುತ್ತಿದ್ದರು. ಮುಂಬೈಯ ಹೊಸ ಫ್ಯಾಷನ್ನೊಂದಿಗೆ ಬಂದು ಹೊಸ ಹೊಸ ಬಟ್ಟೆ, ತಿಂಡಿ ತಿನಿಸು ತರುವ ಅವರನ್ನು ಸ್ಥಳೀಯ ಕುಟುಂಬದವರು ಚಾತಕ ಪಕ್ಷಿಯಂತೆ ಕಾಯುತ್ತಿದ್ದರು. ಆ ಏಕತ್ರ ಕುಟುಂಬದ ಮಜಾ ಅನುಭವಿಸಿದವರಿಗೇ ಗೊತ್ತು. ಅವರು ಮರಳಿಹೋಗುವಾಗ ಎಲ್ಲರ ಕಣ್ಣು ತುಂಬಿಬರುತ್ತಿತ್ತು. ಅಲ್ಲದೇ ಅವರಿಗೆ ಪ್ರೀತಿಯಿಂದ ಮನೆಯಲ್ಲಿ ಮಾಡಿದ ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಹಾಗೂ ಮಾವು, ಒಣಮೀನು ಇವು ತುಂಬಿ ತುಂಬಿ ಕೊಡುತ್ತಿದ್ದರು.ನಮ್ಮ ಮನೆಯಲ್ಲಿಯೂ ಇದೇ ವಾತಾವರಣ ಸದಾಕಾಲ ಇತ್ತು, ಈಗಲೂ ಇದೆ.
ಹೀಗೆ ಆ ಕಾಲದಲ್ಲಿ ಸಾಮಾನ್ಯವಾಗಿ ಮುಂಬೈ ಭಾಗವು ನಮ್ಮ ಹೆಣ್ಣುಮಕ್ಕಳ “”ಮದುವೆಮಾರ್ಕೆಟ್”” ಆದರೆ, ಗಂಡು ಮಕ್ಕಳಿಗೆ “”ನೌಕರಿಯ ಮಾರ್ಕೆಟ್ “” ಆಗಿತ್ತು. ಇಲ್ಲಿನ ಹೆಣ್ಣುಮಕ್ಕಳು ಅತ್ಯಂತ ಸಂಸ್ಕಾರಯುತ, ಸುಂದರ ಹಾಗೂ ತಗ್ಗಿ, ಬಗ್ಗಿ ನಡೆಯುವ ಹಾಗೂ ಹೊಂದಿಕೊಳ್ಳುವ ಹಿನ್ನೆಲೆಯವರಿದ್ದುದರಿಂದ, ಮದುವೆಯ ಸಂಬಂಧಗಳು ಹೆಚ್ಚು ಹೆಚ್ಚು ಇಲ್ಲಿಯವರೊಂದಿಗೆ ಬೆಸೆಯುತ್ತಿದ್ದವು.ಹೀಗಾಗಿ ಕೊಂಕಣಿ ಭಾಷಿಕರು ತಮ್ಮ ಹೆಣ್ಣು ಮಕ್ಕಳಿಗೆ ಮರಾಠಿ ಪ್ರಾಥಮಿಕ ಶಿಕ್ಷಣ ಕೊಡಿಸುತ್ತಿದ್ದರು. ಹೊರ ಊರಿನಲ್ಲಿ ಅವರಿಗೆ ಮರುಭೂಮಿಯಲ್ಲಿ ಬಿಟ್ಟಂತೆ ಭಾಸವಾಗಿ, ಕಷ್ಟ ಅನುಭವಿಸಬಾರದೆಂದು, ತಕ್ಕಮಟ್ಟಿನ ಶಿಕ್ಷಣ ನೀಡುತ್ತಿದ್ದರು.ಹೆಚ್ಚು ಶಿಕ್ಷಣದ ಗಂಡು ಮಕ್ಕಳಿಗೂ ನೌಕರಿ ಮುಂಬೈಯಲ್ಲಿ ಬೇಗ ಸಿಗುತ್ತಿತ್ತು. ಕಡಿಮೆ ಶಿಕ್ಷಣದ ಉಳಿದವರು ಅಂಕೋಲೆಯಲ್ಲಿ ಸಣ್ಣಪುಟ್ಟ ನೌಕರಿಯಲ್ಲಿ ಇದ್ದು, ಜಮೀನು ದೇಖರೇಖೆ ಮಾಡುತ್ತಿದ್ದರು. ಹೀಗೆ ಆಕಡೆ ಹೋಗಿ ನೌಕರಿಹೊಂದಿ ಸಂಪಾದನೆಮಾಡುವವರು, ಅಂಕೋಲೆಯ ಕುಟುಂಬಕ್ಕೆ ಹಣಕಾಸಿನ ಆಧಾರ ನೀಡುತ್ತಿದ್ದರಿಂದ, ಊರಿನವರು ಬಿನಾ ಜಂಝಟ್ ಮನೆ ನಡೆಸುತ್ತಿದ್ದರು.
ಬ್ರಿಟಿಷರು ಹೆಣ್ಣುಮಕ್ಕಳಿಗಾಗಿ ಸ್ಥಾಪಿಸಿದ ಈ ಮರಾಠಿಶಾಲೆ, ಈಗಿನ ಬಿ ಇ ಓ ಆಫಿಸು ಇರುವ ಕಟ್ಟಡವಾಗಿತ್ತು. ಅದು ಮೂಲತಃ ಗಾoವಟಿ ಹಂಚು ಚಾವಣಿಯ ಮಾಡು ಹೊಂದಿದ್ದು, ನಂತರ ಮಂಗಳೂರು ಹಂಚು ಛಾವಣಿಯಲ್ಲಿ ಬದಲಾಯಿತು. (ಫೋಟೋ ನೋಡಿರಿ )ಪಕ್ಕದಲ್ಲೇ ತಾಲೂಕಿನ ಪ್ರಥಮ ಸರಕಾರಿ ಗಂಡು ಮಕ್ಕಳ ಪ್ರಾಥಮಿಕಶಾಲೆ ಹಾಗೂ ಪ್ರಥಮ ಉರ್ದು ಶಾಲೆ ಇತ್ತು. ಅಂಕೋಲೆಯ ಸಾಮಾನ್ಯರಿಂದ ಪ್ರತಿಷ್ಟಿತ ಕುಟುಂಬದ ಹೆಣ್ಣುಮಕ್ಕಳು ಇಲ್ಲಿಯೇ ಮರಾಠಿ ಶಿಕ್ಷಣ ಪಡೆಯುತ್ತಿದ್ದರು. ಪಠ್ಯದ ಜೊತೆಗೆ ಶಾಲೆಯಲ್ಲಿ ಖಾದಿ ನೂಲನ್ನು ತಕಲಿಯ ಮೂಲಕ ತೆಗೆಯುವದು, ಅನಂತರ ಅಲ್ಲಿದ್ದ ಮಗ್ಗದಿಂದ ಬಟ್ಟೆಮಾಡುವದು, ಅದನ್ನು ಬಹಿರಂಗ ಸವಾಲುಮಾಡಿ ಶಾಲೆಗೆ ಉತ್ಪನ್ನ ಪಡೆಯುವದು ಮತ್ತು ವಿಶೇಷವಾಗಿ ಅಕ್ಕಪಕ್ಕದಲ್ಲಿ ಬಿದ್ದ ದನಗಳ ಶೆಗಣಿ ಹಾಗೂ ತರ್ಕನ್ನು ಹೆಕ್ಕಿ ತಂದು ಗೊಬ್ಬರಕುಳಿ ಮಾಡಿ, ನಂತರ ತರಕಾರಿ ಬೆಳೆಸಿ ಮಾರಾಟಮಾಡುವದು, ಪ್ರತಿ ಶನಿವಾರ ಸಂಪೂರ್ಣ ಶಾಲೆಯನ್ನು ಮಕ್ಕಳೇ ಶೆಗಣಿಯನ್ನು ಸಾರಿಸಿ ಸ್ವಚ್ಚಗೊಳಿಸುವದು, ಪ್ರತಿನಿತ್ಯ ಪಾಳಿಯಲ್ಲಿ ರಂಗೋಲಿ ಹಾಕುವದು ಇತ್ಯಾದಿಮಾಡುತ್ತಿದ್ದರು. ಶಾಲೆಯಲ್ಲಿ ಸಾಕಷ್ಟು ಮರಾಠಿ ಪುಸ್ತಕಗಳ ಸಂಗ್ರಹ ಹಾಗೂ ಅತಿಹೆಚ್ಚು ನಕಾಷೆಗಳ ಸಂಗ್ರಹ ಇತ್ತು.ಮತ್ತು ಇಷ್ಟು ಸಂಗ್ರಹ ಹೊಂದಿರುವ ಏಕೈಕ ಶಾಲೆ ಎಂಬ ಹಿರಿಮೆ ಹೊಂದಿತ್ತು . ಇಲ್ಲಿ ಶಿಕ್ಷಕಿ ಕೃಷ್ಣಾಬಾಯಿಯವರು ಪ್ರಥಮ ಚಿಕಿತ್ಸಾ ಪದ್ದತಿಯನ್ನೂ ಸಹ ಕಲಿಸುತ್ತಿದ್ದರು.ಇನ್ನೊಂದು ವಿಶೇಷತೆ ಎಂದರೆ ಪರಿಶಿಷ್ಟ ಸಮಾಜದ ಹೆಣ್ಣುಮಕ್ಕಳೂ ಸಹ ಯಾವುದೇ ತಾರತಮ್ಯ ಇಲ್ಲದೇ ಶಿಕ್ಷಣ ಪಡೆಯುತ್ತಿದ್ದರು. ಮುಸ್ಲಿಂ ಸಮಾಜದ ಓರ್ವ ಹೆಣ್ಣುಮಗಳೂ ಈ ಶಾಲೆಯಲ್ಲಿ ಕಲಿತಿದ್ದಳು. ದಿನವೂ ಧೈಹಿಕ ಶಿಕ್ಷಣ,ಲೆಜಿಮ್ ತರಬೇತಿ ಪಡೆಯುವದಲ್ಲದೆ, ಎಲ್ಲಾ ಶಿಕ್ಷಕ ವಿದ್ಯಾರ್ಥಿಗಳು ರಾಷ್ಟ್ರೀಯ ಉತ್ಸವಗಳ ಪ್ರಭಾತಫೇರಿಯಲ್ಲಿ ಭಾಗವಹಿಸುತ್ತಿದ್ದರು. ಶಾಲೆಯಲ್ಲಿ ಆಗಿನ ಅಮೇರಿಕಾ ದೇಶದ ಸಹಕಾರದಲ್ಲಿ ಕೇರ್ ಸಂಸ್ಥೆಯಿಂದ ನೀಡಲ್ಪಡುವ ಉಪ್ಪಿಟ್ಟು, ಹಾಲು ಸಹ ಶಾಲೆಯಲ್ಲಿಯೇ ತಯಾರಿಸಿ ಬಿಸಿಬಿಸಿಯಾಗಿ ಪೂರೈಸಲ್ಪಡುತ್ತಿತ್ತು.
ಮೊದಲು ಕೇವಲ ಹೆಣ್ಣುಮಕ್ಕಳಿಗೆ ಮೀಸಲಾಗಿ ಶಿಕ್ಷಣ ನೀಡುತ್ತಿದ್ದರಿಂದ ಅದು “ಮುಲೀಚೆ ಶಿಕ್ಷಣ ಸ್ಕೂಲ್” ಎಂಬ ಪಟ್ಟಿ ಹೊಂದಿತ್ತು. ಆದರೆ ಶಾಲೆಯಲ್ಲಿ, ನಂತರದ ದಿನಗಳಲ್ಲಿ ಒಂದು ಚಮತ್ಕಾರ ನಡೆಯಿತು. ಆಗ ಮುಂಬೈಯಿಂದ ಬಂದ ಅನೇಕ ಗಂಡುಮಕ್ಕಳು ಭಾಷಾ ಸಮಸ್ಯೆಯಿಂದ ಅಂಕೋಲೆಯಲ್ಲಿ ಶಿಕ್ಷಣ ಪಡೆಯದೇ ಕಷ್ಟ ಅನುಭವಿಸುತ್ತಿದ್ದರು. ಅವರು ಮರಾಠಿ ಭಾಷಿಕರಾಗಿದ್ದರಿಂದ, ಶಿಕ್ಷಣ ಪಡೆಯುವ ಅವಶ್ಯಕತೆ ಇತ್ತು. ಅದೇ ಸಂದರ್ಭದಲ್ಲಿ ಆಗಿನ ಖ್ಯಾತ ವಕೀಲರಾಗಿದ್ದ ಶ್ರೀ ಬಿ ಎಸ್ ಮಾವಿನಕುರ್ವೆ ಇವರ ಮೊಮ್ಮಕ್ಕಳಾದ ಗುರುದಾಸ ಕಾಮತ್ (ಆ ನಂತರ ಭಾರತ ಸರಕಾರದ ಮಂತ್ರಿಯಾದರು )ಹಾಗೂ ಮೋಹನ ಕಾಮತ (ಇಂದು ಆಟೋಮೋಬೈಲ್ ಕ್ಷೇತ್ರದ ಖ್ಯಾತ ಉದ್ಯಮಿ )ಈ ಬಲರಾಮ, ಕೃಷ್ಣರ ಜೋಡಿ ಅಂಕೋಲೆಯ ಅಜ್ಜನ ಮನೆಗೆ ಮುಂಬೈಯಿಂದ ಕೆಲಕಾಲ ಉಳಿಯಲು ಬಂದಾಗ, ಶಿಕ್ಷಣ ಮತ್ತು ಭಾಷಾ ಸಮಸ್ಯೆಬಂತು. ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಮಾವಿನಕುರ್ವೆ ವಕೀಲರು ತಮ್ಮೆಲ್ಲ ಪ್ರಭಾವವನ್ನು ಬಳಸಿ ಈ ಮರಾಠಿ ಶಾಲೆಯಲ್ಲಿ ಗಂಡು ಮಕ್ಕಳಿಗೂ ಶಿಕ್ಷಣ ಕೊಡಿಸಬೇಕೆಂಬ ಪ್ರಯತ್ನ ಮಾಡಿ ಯಶಸ್ಸು ಪಡೆದರು. ಅಂದಿನಿಂದ “”ಮರಾಠಿ ಮುಲಿoಚಿ ಜೀವನ ಶಿಕ್ಷಣ ಶಾಲಾ ” ಎಂದು ಇದ್ದುದು, “”ಮರಾಠಿ ಮುಲಿ ಆನಿ ಮುಲಾಚೆ ಜೀವನ ಶಿಕ್ಷಣ ಶಾಲಾ”” ಎಂದು ಪುನರ್ನಾಮಕರಣ ಗೊಂಡಿತು. ಇಲ್ಲಿ ವಿಶೇಷವಾಗಿ ಕಲಿಸಿದ ಶಿಕ್ಷಕ ವರ್ಗದವರ ಪೈಕಿ, ಶ್ರೀಮತಿ ಕೃಷ್ಣಾಬಾಯಿ ನಾರ್ವೆಕರ್ (ಎಡ್ವರ್ಡ್ ಹೈಸ್ಕೂಲಿನ ಶ್ರೀಪಾದ್ ಮಾಸ್ಟರರ ಹೆಂಡತಿ )ಇವರ ಯೋಗದಾನವು ವಿಶೇಷವಾಗಿದ್ದು, ಅವರು ಬಹುಕಾಲ ಶಿಕ್ಷಕಿಯಾಗಿ ನಂತರ ಮುಖ್ಯಾಧ್ಯಾಪಿಕೆಯಾಗಿ ಆಹಾರ್ನಿಷಿ ಸೇವೆಸಲ್ಲಿಸಿದರು. ಹೀರಾಬಾಯಿ ದೇಸಾಯಿ,ರಮಾಬಾಯಿ,ಲಲಿತಾ ಕಾಮತ, ಶೈಲಾಬಾಯಿ, ಪೋಲಿಸ್ ಕಾನ್ಸ್ಟೇಬಲ್ ಇವರ ಪತ್ನಿಯಾದ ಜೋರ್ಜ್ ಬಾಯಿ( ಇವರದು ಇಂಗ್ಲಿಷ್ ಮತ್ತು ಗಣಿತ ವಿಷಯ), ಪ್ರೇಮಬಾಯಿ ಇವರೂ ಸಹ ಉತ್ತಮ ಶಿಕ್ಷಕಿಯರಾಗಿ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನವರಾಗಿದ್ದರು.
ಆಗಿನ ಅಂಕೋಲೆಯ ಬಹುತೇಕ ಕೊಂಕಣಿ ಮಾತೃಭಾಷೆಯ ಮನೆಯಲ್ಲಿ ಮರಾಠಿ ಭಾಷೆಯನ್ನೂ ಸಹ ಮಾತನಾಡುವಾಗ ಬಳಸುತ್ತಿದ್ದರು. ಶ್ರೀಯುತ ಪಿ . ಎಸ್. ಪ್ರಭು, ಹರಿ ಪೈ, ಕಿಮಾನಿಕರ,ಪಾಂಡುರಂಗ ಕಾಮತ್, ವಿ.ಪಿ. ಕಾಮತ, ಹೆಗ್ಡೆ ಖಾನಾವಳಿ, ಗುಡಿಗಾರರ ಕುಟುಂಬ , ಕಾರ್ಖಾನಿಸ್, ಶ್ರೀನಿವಾಸ್ ಮಹಾಲೆ, ಎಂ. ಟಿ. ನಾರ್ವೆಕರ್, ಕಮಲಾಕಾರ ನಾರ್ವೆಕರ್,ಬೀಡಿ ರಾಮಾ, ಶಾಂತಾ ಲಕ್ಮೇಶ್ವರ್, ಶಾಂಡು ಪೋಕ್ಕಾ, ಪಾಲೇಕರ್, ಆನಂದ ನಾಡಕರ್ಣಿ, ಡಾ. ಮoಕಾಳಿ ಹನುಮಟ್ಟೇಕರ್, ಶ್ರೀನಿವಾಸ್ ಕಾಮತ, ರೆಂಜರ್ ದೇಸಾಯಿ, ಘೋಡೆ, ಕೊಯಿರು ಪ್ರಭು, ಹರ್ವಾಡೇಕರ್, ಚಿಂಚೋಳ್ಕರ್, ಹೊನ್ನೇಕೇರಿ ವಸಂತ ಶೆಟ್ಟಿ, ಕುರ್ಡೇಕರ್, ಶ್ರೀ ವಿಠೋಬ್ ದೇವಸ್ಥಾನ,ಶ್ರೀ ಆರ್ಯಾದುರ್ಗ ದೇವಸ್ಥಾನ, ಶ್ರೀ ಸುಂದರ ನಾರಾಯಣ ದೇವಸ್ಥಾನದ ಅರ್ಚಕ ಇತ್ಯಾದಿ ಕುಟುಂಬದ ಎಲ್ಲಾ ಹೆಣ್ಣು ವ ಗಂಡು ಮಕ್ಕಳು ಹೆಚ್ಚಾಗಿ ಇಲ್ಲಿಯೇ ಶಿಕ್ಷಣ ಪಡೆದು ತಮ್ಮ ಜೀವನ ಉಜ್ವಲಗೊಳಿಸಿಕೊಂಡರು. ನಮ್ಮ ಮನೆಯಲ್ಲಿಯೂ ಸಹ ನನ್ನ ಅತ್ತೆಯರಾದ ಶಾಂತುಬಾಯಿ, ಶಶಿಕಲಾ, ಚಿಕ್ಕಪ್ಪ ನರೇಂದ್ರ ನಾರ್ವೆಕರ್ ಇವರೆಲ್ಲ ಇಲ್ಲಿಯೇ ಮರಾಠಿ ಶಿಕ್ಷಣ ಪಡೆದು ಮುಂಬೈಯಲ್ಲಿ ನೆಲೆಸಿದರು.
ನಾವು ಕನ್ನಡ ಒಂದನೇ ನಂಬರ್ ಶಾಲೆಯಲ್ಲಿ ಕಲಿಯುತ್ತಿರುವಾಗ ನಮ್ಮ ಹುಡುಗರು ಮರಾಠಿ ಶಾಲೆಯ ಹೆಣ್ಣುಮಕ್ಕಳನ್ನು ಕೆಣಕಿಸಿ “”ಮಲಾ ಕಾಯ್, ತುಲಾ ಕಾಯ್, ಆಣೆಗೆರಡು ತೆಂಗಿನಕಾಯಿ “” ಎಂದು ಹೇಳುವದು ಮತ್ತು ಆ ಹೆಣ್ಣು ಮಕ್ಕಳು ನಮಗೆ “” ಕನ್ನಡಚೋ ಮಳ್ಳಾ, ಕಳ್ಳಾ “” ಎಂದು ಕೆಣಕುತ್ತಿದ್ದರು. ಈ ಹುಡುಗಾಟವು ಶಾಲಾ ಪರಿಸರದಲ್ಲಿ ಮಾತ್ರ ನಡೆಯುತ್ತಿತ್ತು ಮತ್ತು ಈ ಕಿಚಾಪತಿ ನನ್ನದೆಂದು ತಿಳಿದು ನಾನು ಶ್ರೀಮತಿ ಕೃಷ್ಣಾಬಾಯಿಯವರಿಂದ ಈ ಬಗ್ಗೆ ಸಾಕಷ್ಟುಬಾರಿ ಅವರ ಮೃದುವಾದ ಛಡಿ ಏಟು ತಿಂದಿದ್ದೇನೆ. ನನ್ನದಲ್ಲದ ತಪ್ಪಿಗೂ ಹೊಡೆತ ತಿಂದಿದ್ದುoಟು.
ಆದರೆ 1980 ರ ನಂತರ ಕ್ರಮೇಣ ಮರಾಠಿ ಶಿಕ್ಷಣ ಪಡೆಯಲು ಶಾಲೆಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ, ಶಾಲೆ ಮುಚ್ಚುವ ಅನಿವಾರ್ಯ ಪ್ರಸಂಗ ಬಂದು ಶಾಲೆಯು ಇತಿಹಾಸದ ಗರ್ಭದಲ್ಲಿ ಸೇರಿತು. ಇಂದು ಹಳೇ ಬಜಾರದ ರಸ್ತೆಯಿಂದ ಹೋಗುವಾಗ ಈ ಶಾಲೆಯ ಗತವೈಭವದ ನೆನಪು ಬರುತ್ತದೆ.
ಮಾಹಿತಿ: ಸುಭಾಸ್ ನರ್ವೆಕರ್, ನೆನಪಿನಂಗಳದಿ, ANKOLA- CULTURE HISTORY AND ECOLOGY
Photos- Subhash Narvekar



Leave a Reply