ಕಾಡು ಬಳ್ಳಿಯ ಕಣಜದಲ್ಲಿ ಪ್ರವಾಹದ ವಿರುದ್ದ ಒಂದು ಹೋರಾಟ

Posted by

·

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೊರ್ಸೆ ಊರಿಗೆ ರಸ್ತೆ ಸಂಪರ್ಕ ಸಿಕ್ಕ ಕಾರಣ ಈ ವರ್ಷ ಸೇತುವೆ ಕಟ್ಟಲಿಲ್ಲ. ಕಾಡಿನ ಬಳ್ಳಿ ತಂದು, ಬಿದಿರು ಬಳಸಿ ಕಲ್ ಕಣಜದ ಆಧಾರದಲ್ಲಿ ಚೆಂದದ ಸೇತುವೆ ನಿರ್ಮಿಸುವ ಕಲೆ ನದಿ ದಂಡೆಯ ಗ್ರಾಮಸ್ಥರಲ್ಲಿದೆ. ಮಳೆಗಾಲದ ಬಳಿಕ ಬೇಸಿಗೆ ಓಡಾಟಕ್ಕೆ ಇದನ್ನು ನಿರ್ಮಿಸಿದರೆ ಮಾತ್ರಾ ಬದುಕು ಸಲೀಸು.

ಬಳ್ಳಿಯಲ್ಲಿ ಸುತ್ತಿದ ಈ ಕಂಬದ ರಚನೆ ಒಳಗಡೆ ಇರೋದು ನದಿಯ ಕಲ್ಲುಗಳು.ವೇಗವಾಗಿ ಹರಿಯುವ ನೀರು ಕಂಬಕ್ಕೆ ಹಾಕಿದ ಕಲ್ಲಿನ ನಡುವೆ ನುಸುಳಿ ಮುಂದೆ ಸಾಗುತ್ತದೆ. ಹರಿವ ನೀರಿಗೆ ತಡೆ ಒಡ್ಡದೆ ಸೇತುವೆ ನಿರ್ಮಾಣ! ಇಲ್ಲಿ ಪ್ರವಾಹದ ವಿರುದ್ಧ ಈಜುವ ಬದಲು ಬದುಕುವ ಜಾಣ ಸೂತ್ರ ಇದೆ. ವರ್ಷಕ್ಕೆ ಒಮ್ಮೆ ಡಿಸೆಂಬರ್ ಕೊನೆಯಲ್ಲಿ ಊರೆಲ್ಲ ಒಂದಾಗಿ ಕಟ್ಟುವ ಸೇತುವೆ ಪರಂಪರೆಯ ಕೌಶಲ್ಯದ ಸಾಕ್ಷಿ. ಇತ್ತೀಚೆಗೆ ನೋಡಲು ಹೋದರೆ ಈ ವರ್ಷ ಸೇತುವೆ ಕಟ್ಟಿಲ್ಲ ಅಂದ್ರು. ಅದಕ್ಕೆ 24 ವರ್ಷಗಳ ಹಿಂದೆ ತೆಗೆದ ಈ ಚಿತ್ರ ನೆನಪಾಯ್ತು.

ನೋಡಿ, ದೊಡ್ದ ದೊಡ್ದ ಸೇತುವೆ ಕಟ್ಟುವ ಇಂಜಿನಿಯರ್ ಗಳು ಈ ಗ್ರಾಮೀಣ ಕೌಶಲ್ಯ ಕುರಿತು ಯೋಚಿಸಬೇಕು. ಸೇತುವೆ ನಿರ್ಮಾಣ ಮಾಡುವಾಗ ದೊಡ್ದ ಕಂಬ, ಕಾಂಕ್ರೀಟು, ಕಬ್ಬಿಣ ಬಳಸುವ ನೀವು ಕಾಡು ಬಳ್ಳಿಯ ಕಣಜದಲ್ಲಿ ನೀರಿನ ವಿರುದ್ದ ಬದುಕು ಗೆದ್ದ ದೇಸಿ ಮಾದರಿ ಅಭ್ಯಾಸ ಮಾಡಬೇಕು. ತುಕ್ಕು ಹಿಡಿಯದ ಲೋಹದ ಹಗ್ಗವನ್ನು ಸುತ್ತಿ ಹೀಗೆ ಕಲ್ಲು ತುಂಬಿ ಪುಟ್ಟ ಸೇತುವೆ ನಿರ್ಮಿಸುವ ತಂತ್ರ ಜ್ಞಾನ ಕಲಿತರೆ ಕಡಿಮೆ ವೆಚ್ಚದಲ್ಲಿ ಸಣ್ಣ ಸಣ್ಣ ಹಳ್ಳಕ್ಕೆ ಹಳ್ಳಿಗೆ ಅನುಕೂಲ ಮಾಡಬಹುದು. ಸೇತುವೆ ಯೋಜನಾ ವೆಚ್ಚ ಏರುತ್ತ ಹೋಗುವ ಈ ದಿನಗಳಲ್ಲಿ ಕಡಿಮೆ ವೆಚ್ಚ, ಸುಸ್ಥಿರ ಅಭಿವೃದ್ಧಿ ದಾರಿ ಹುಡುಕಬೇಕು.

ಅಯ್ಯೋ! ಏನ್ ಮಾಡೋಣ? ನೀವು ಕಲಿತ ವಿದ್ಯೆ ಕಾಂಕ್ರೀಟ್ ನದು! ನೆಲ ಮೂಲದಲ್ಲಿ ಮಣ್ಣಿನಲ್ಲಿ ಕಲಿಯೋದು ಇದೆ ಅನ್ನೋದು ಎಲ್ಲರಿಗೂ ಮರೆತೇ ಹೋಗಿದೆ. ಒಮ್ಮೆ ಬಿಡುವು ಮಾಡಿಕೊಂಡು ಮಣ್ಣಿನಲ್ಲಿ ಕಲಿಯೋಕೆ ಬನ್ನಿ ಮಾರಾಯ್ರೆ, ಪರಿಸಸ್ನೇಹಿ ದಾರಿ ಹುಡುಕಿ ಕಲಿಯಬಹುದು.

✍️ ಶಿವಾನಂದ್ ಕಳವೆ


Discover more from Suggi Sampada

Subscribe to get the latest posts sent to your email.

Leave a Reply

You cannot copy content of this page

Discover more from Suggi Sampada

Subscribe now to keep reading and get access to the full archive.

Continue reading