(ವಾಘ ಒಂದು ಸಾಮಾನ್ಯ ಬಡ ಕುಟುಂಬದಿಂದ ಬಂದ ತನ್ನ ಬದುಕಿನುದ್ದಕ್ಕೂ ಸಾಮಾಜಿಕ ನ್ಯಾಯದ ಪ್ರಶ್ನೆಯನ್ನೇ ಮುಂದಿಟ್ಟುಕೊಂಡು ಹೋರಾಡಿದವ. ತನ್ನದೆಂಬ ಯಾವ ರಾಜ್ಯವನ್ನು ಹೊಂದಿರದ ಆತ ಬ್ರಿಟಿಷರಿಂದ ತೀವ್ರ ಶೋಷಣೆಗೊಳಗಾದ ಸಮಾಜದ ಕೆಳಸ್ಥರದ ದುಡಿಯುವ ವರ್ಗದ ಪರವಾಗಿ ಧ್ವನಿಎತ್ತಿದವ. ಮುಂದೆ ರಾಜಮಹಾರಾಜರುಗಳಲ್ಲದೇ ಜನ ಸಮಾನ್ಯರೂ ಹೋರಾಡಲು ಮುಂದಡಿಯಿಡಲು ಕಾರಣನಾದವ.)
‘ಸೆಪ್ಟೆಂಬರ ಹತ್ತು’ ಈ ನೆಲದ ಚರಿತ್ರೆಯಲ್ಲಿ ಅತ್ಯಂತ ಪ್ರಮುಖವಾದ ದಿನ. ಜಿಲ್ಲೆಯ ಇತಿಹಾಸ ಎಂದೆಂದೂ ಮರೆಯಲಾಗದ ತಾರೀಖು. ಬಡರೈತರಿಗಾಗಿ ಹೋರಾಡಿದ ಇಬ್ಬರು ಮಹಾ ಪುರುಷರ ಬದುಕಿನ ಉದಯಾಂತ್ಯದ ಕೊಂಡಿ. ದನಿಯಿಲ್ಲದ ದೀನರ ಧ್ವನಿಯಾಗಿ, ಅವರ ಹೊಟ್ಟೆಯ ಹಿಟ್ಟಿಗಾಗಿ, ಅಸ್ಥಿತ್ವಕ್ಕಾಗಿ ಅಧಿಕಾರಷಾಹಿಯ ವಿರುದ್ಧ ಹೋರಾಡಿದ ‘ಧೋಂಡಿಯಾ ವಾಘ’ ಮಡಿದದ್ದು ಮತ್ತು ‘ದಿನಕರ ದೇಸಾಯಿ’ ಹುಟ್ಟಿದ್ದು ಇದೇ ‘ಸೆಪ್ಟೆಂಬರ ಹತ್ತ’ರಂದು. ಬೆದರಿಕೆ, ವಂಚನೆ ಸಂಚುಗಳಿಂದ ಬ್ರಿಟಿಷರು ಭಾರತೀಯ ನೆಲವನ್ನು ಆಕ್ರಮಿಸಿಕೊಳ್ಳುತ್ತಿರುವಾಗ ವಿರೋಧಿಸಿದ ರಾಜರುಗಳು ಸೋತು ಅವರ ಅಧೀನವಾದಾಗ ಸಮಾಜದ ದುಡಿಯುವ ವರ್ಗದ ಜನತೆಯ ಪರವಾಗಿ ಬ್ರಿಟಿಷರನ್ನು ಎದುರಿಸಿದ ಮಹಾನ್ ಯೋಧ ‘ಧೋಂಡಿಯಾ ವಾಘ’. ವಾಘ ಮಡಿದು ಸರಿಯಾಗಿ ಒಂದು ನೂರಾ ಒಂಭತ್ತು ವರ್ಷಗಳ ಮೇಲೆ ಹುಟ್ಟಿದ ‘ದಿನಕರ ದೇಸಾಯಿ’ ಕೂಡ ಅದೇ ದುಡಿಯುವ ಕೈಗಳಿಗಾಗುವ ಶೋಷಣೆಯನ್ನು ಪ್ರತಿಭಟಿಸಿ ಹೋರಾಡಿದ್ದು ವಿಶೇಷ.
ಕರ್ನಾಟಕದ ಇತಿಹಾಸದಲ್ಲಿ ಹಲವು ಕಾರಣಗಳಿಗಾಗಿ ಪ್ರಾಮುಖ್ಯತೆ ಪಡೆದ ಕ್ರಿ.ಶ. 1800 ರ ಆಸುಪಾಸಿನ ಬಂಡಾಯಗಳ ಚರಿತ್ರೆಯನ್ನು ಕಟ್ಟಿಕೊಡುವಲ್ಲಿ ಬಹುಮುಖ್ಯ ಭೂಮಿಕೆ ನಿರ್ಮಿಸಿದವರಲ್ಲಿ ‘ಧೋಂಡಿಯಾ ವಾಘ’ ಕೂಡ ಒಬ್ಬ. 1799ರಲ್ಲಿ ಟಿಪ್ಪೂವಿನ ಸಾವಿನ ನಂತರ ಬ್ರಿಟಿಷರಿಗೆ ಭಾರತದಲ್ಲಿದ್ದ ಕಡೆಯ ಗಂಡಾಂತರ ಕಳೆದಂತಾಯಿತು. ಶ್ರೀರಂಗಪಟ್ಟಣದ ಸಬ್ಸಿಡರಿ ಒಪ್ಪಂದಕ್ಕೆ ಸಹಿ ಹಾಕಿ ಒಡೆಯರು ತಮ್ಮ ಸ್ವಾತಂತ್ರ್ಯವನ್ನು ಬಲಿ ನೀಡಿದರು. 1799-1800ರ ಮೈಸೂರು ಒಪ್ಪಂದ ಪಾಳೆಯಗಾರರನ್ನು ನಾಶ ಮಾಡಿತು. ಈ ವೇಳೆಗೆ ಈಸ್ಟ್ ಇಂಡಿಯಾ ಕಂಪನಿ ಕೃಷ್ಣಾನದಿಯಿಂದ ಕನ್ಯಾಕುಮಾರಿಯವರೆಗೆ ಬಹುದೊಡ್ಡ ಪ್ರದೇಶದ ಮೇಲೆ ತನ್ನ ಸ್ವಾಮ್ಯತೆಯನ್ನು ಸಾಧಿಸಿತ್ತು. ಇಂಥ ಸಂದರ್ಭದಲ್ಲಿ ಬ್ರಿಟಿಷರನ್ನು ಎದುರಿಸಿದ ಪ್ರಥಮ ವೀರ ‘ಧೋಂಡಿಯಾ ವಾಘ’.
ಈ ಧೋಂಡಿಯಾ ವಾಘ ಮರಾಠಾ ವಂಶಸ್ಥ. ಚನ್ನಗಿರಿ ಮೂಲದವನು. ಆರಂಭದಲ್ಲಿ ಈತ ಕೊಲ್ಲಾಪುರದ ಮರಾಠಾ ಸೈನ್ಯದಲ್ಲಿದ್ದು, ಕ್ರಿ.ಶ. 1780ರ ವೇಳೆಗೆ ಹೈದರನ ಸೈನ್ಯಕ್ಕೆ ಸೇರಿಕೊಳ್ಳತ್ತಾನೆ. ಮುಂದೆ ಟಿಪ್ಪೂವಿನ ಸೈನ್ಯದಲ್ಲಿದ್ದ ವಾಘನಿಗೆ ಕ್ರಿ.ಶ. 1794ರಲ್ಲಿ ಟಿಪ್ಪೂ ಇಸ್ಲಾಂಮಿಗೆ ಮತಾಂತರಗೊಳಿಸಲು ಪ್ರಯತ್ನಸಿದಾಗ ಪ್ರತಿಭಟಿಸಿ ಸೆರೆಯಾಳಾಗುತ್ತಾನೆ. ಟಿಪ್ಪೂವಿನ ಸೆÀರೆಯಿಂದ ತಪ್ಪಿಸಿಕೊಂಡ ಧೋಂಡಿಯಾ ವಾಘ ಬಿದನೂರಿಗೆ ಬಂದು ನೆಲೆಸಿ, ಟಿಪ್ಪ್ಪೂ ಮತ್ತು ಬ್ರಿಟಿಷರಿಂದ ತೊಂದರೆಗೊಳಗಾಗಿದ್ದ ಜನತೆಯನ್ನು ಸಂಘಟಿಸಿ, ಸುಮಾರು ಐದು ಸಾವಿರ ಕುದುರೆ ಸೈನ್ಯ ಒಟ್ಟುಗೂಡಿಸಿ, ಶಿವಮೊಗ್ಗವನ್ನು ಕೆಲವು ನಿಜಾಂ ಪ್ರಾಂತ್ಯಗಳನ್ನು ವಶಪಡಿಸಿಕೊಂಡು, ಕರ್ನಲ್ ವೆಲ್ಲೆಸ್ಲಿಯನ್ನು ಗುಪ್ತವಾಗಿ ಅಪಹರಿಸಲು ಪ್ರಯತ್ನಿಸಿ ವಿಫಲನಾದ. ಇಂಗ್ಲೀಷರನ್ನು ಕರ್ನಾಟಕಕ್ಕೆ ಕರೆತರಲು ಪೂರ್ಣಯ್ಯ ಕಾರಣ ಎಂದು ಅವರನ್ನು ಕೊಲ್ಲಲು ಯತ್ನಿಸಿ ಅದರಲ್ಲೂ ವಿಫಲನಾದ. ಮುಂದೆ ಅರ್ಥರ್ ವೆಲ್ಲೆಸ್ಲಿ, ಕರ್ನಲ್ ಪೇಟರ ಮತ್ತು ಕರ್ನಲ್ ಡಾಲ್‍ರಿಂಪಲ ಅವರ ಸಹಾಯದೊಂದಿಗೆ ಹಾಸನ, ಚಿತ್ರದುರ್ಗ ಮತ್ತು ಶಿಕಾರಿಪುರ ಕೋಟೆಗಳ ಮೇಲೆ ದಾಳಿಮಾಡಿದಾಗ ಧೋಂಡಿಯಾ ವಾಘ ವೀರಾವೇಶದಿಂದ ಹೋರಾಡಿದ. ಆದರೆ ಅವನ ಸೈನ್ಯವು ಹೆಚ್ಚು ಹಾನಿಗೆ ತುತ್ತಾಗಿದ್ದರಿಂದ ಮರಾಠಾ ಪ್ರಾಂತ್ಯಕ್ಕೆ ಓಡಿಹೋಗಬೇಕಾಯಿತು. ಗೋಖ್ಲೆಪಂಥನ ಸೇನೆಯೊಡನೆ ಹೋರಾಡಬೇಕಾಯಿತು. ಬ್ರಿಟಿಷರನ್ನು ಎದುರಿಸುವುದಕ್ಕೆ ಸುತ್ತಮುತ್ತಲ ಮುಖಂಡರು, ನಾಯಕರು, ಸರದಾರರುಗಳನ್ನು ಒಟ್ಟುಗೂಡಿಸುವ ಪ್ರಯತ್ನ ಮುಂದುವರಿಸಿದ. 1798ರ ವೇಳೆಗೆ ಪಶ್ಚಿಮ ಕರಾವಳಿಗೆ ಬಂದ ಫ್ರೆಂಚ್ ರಾಯಭಾರಿಗಳು ಬ್ರಿಟಿಷ್ ವಿರುದ್ಧದ ದಂಗೆಗಳಿಗೆ ಉತ್ತೇಜನ ನೀಡಿ ಬ್ರಿಟಿಷರ ವಿರುದ್ಧದ ಹೋರಾಟಗಳಿಗೆ ಸಹಕಾರ ನೀಡಲು ಮುಂದೆ ಬರುತ್ತಾರೆ.
ಸಮರ್ಪಕವಾದ ಸಂರ್ಪಕ ಸಾಧನಗಳಿಲ್ಲದ ಕಾಲದಲ್ಲಿ ತನ್ನದೇ ಆದ ಬೇಹುಗಾರಿಕಾ ಪದ್ಧತಿಯಿಂದಾಗಿ ಕರ್ನಾಟಕ ಮತ್ತು ತಮಿಳುನಾಡಿನ ಇತರ ಬಂಡಾಯಗಾರರ ಸಂಪರ್ಕಸಾಧಿಸುತ್ತಾನೆ. ಸೇಲಂ ಮತ್ತು ಕೊಯಮುತ್ತೂರು ಬಂಡಾಯಗಾರರು ತಮಿಳುನಾಡಿನ ದಂಗೆಗಳಲ್ಲಿ ವಾಘನ ಸಹಾಯ ಪಡೆಯಲು ‘ದಾನನ್ ಗೋರ’ನ ನೇತೃತ್ವದಲ್ಲಿ ಶಿರಸಿ ಸಮೀಪದ ಸೋಂದಾದಲ್ಲಿ ಭೇಟಿಯಾಗುತ್ತಾರೆ. ಮೊದಲು ವಾಘ ಈ ದಂಗೆÀಗಳಿಗೆ ಬೆಂಬಲಿಸದಿದ್ದರೂ ನಂತರದ ದಿನಗಳಲ್ಲಿ ಕೊಯಮುತ್ತೂರು ಮತ್ತು ಮಧುರೆಯಲ್ಲಿ ಕ್ರಾಂತಿ ಎಬ್ಬಿಸಲು ತನ್ನ ಸರದಾರರನ್ನು ಕಳುಹಿಸಿದ. 1800ರ ಜನವರಿಯಲ್ಲಿ ತಮಿಳು ಸೈನ್ಯದ ಸಹಾಯಕೋರಿ ‘ಮುರುದು ಪಾಂಡ್ಯನ್’ ಎನ್ನುವ ಮಧುರೆಯ ಕ್ರಾಂತಿ ನಾಯಕ, ಕೊಲ್ಲಾಪುರದ ರಾಜ, ಆನೆಗುಂದಿಯ ನಾಯಕ, ನಿಜಾಮನ ಸೈನ್ಯದಲ್ಲಿನ ಹಲವು ಸರದಾರರು, ಸೊಲ್ಲಾಪುರ ಹಾಗೂ ರಾಯದುರ್ಗದ ರಾಜರು ಮತ್ತು ದೌಲತರಾವ್ ಸಿಂಧ್ಯಾ ಸೇರಿ ಒಕ್ಕೂಟವನ್ನು ಸ್ಥಾಪಿಸಿಕೊಂಡರು. ವೆಲ್ಲೂರಿನ ಜೈಲಿನಲ್ಲಿದ್ದ ಟಿಪ್ಪೂವಿನ ದೊಡ್ಡ ಮಗ ಫತೇಹೈದರ ಮೈಸೂರಿನ ಸುತ್ತಮುತ್ತಲ ಗ್ರಾಮಗಳ ಜನರಲ್ಲಿ ಸ್ವಾತಂತ್ರ್ಯದಾಹ ಎಬ್ಬಿಸಿದ. ಹೀಗೆ ವಾಘನ ಅನುಯಾಯಿಗಳ ಸಂಖ್ಯೆ ದೊಡ್ಡದಾಗುತ್ತದೆ.
ಬೃಹತ್ ಸೈನ್ಯದೊಂದಿಗೆ ವಾಘ ಶಿವಮೊಗ್ಗ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬ್ರಿಟಿಷರ ವಿರುದ್ಧವಾಗಿ ನಿಂತ. ಉತ್ತರ ಕನ್ನಡ ಜಿಲ್ಲೆಯಲ್ಲಿ ತಿಮ್ಮಾ ನಾಯಕ, ಹೆಂಜೆ ನಾಯ್ಕ, ಅಂಕೋಲಾದ ಕ್ರಾಂತಿಕಾರಿ ‘ಗಿಡ್ಡ ಗಂಗೋಜಿ’ ಅಥವಾ ‘ಗಿಡ್ಡ ಗಣೇಶ’ ಎನ್ನುವವರು ವಾಘನ ಪರವಾಗಿ ಬ್ರಿಟಿಷರ ವಿರುದ್ಧ ದಂಗೆ ಎದ್ದರು. ಕ್ರಿ.ಶ. 1800ರ ಎಪ್ರಿಲ್‍ನಲ್ಲಿ ವಾಘನು ಹರಪನಹಳ್ಳಿ, ಸವಣೂರು, ರಾಣೆಬೆನ್ನೂರು, ಹಾನಗಲ್ ಮತ್ತು ದಂಬಾಲ್‍ಗಳನ್ನು ವಶಪಡಿಸಿಕೊಂಡಾಗ, ಆತನ ಸಹವರ್ತಿಗಳಾದ ಕನ್ನಡ ಜಿಲ್ಲೆಯ ತಿಮ್ಮಾ ನಾಯಕ ಜಮಾಲಾಬಾದನ್ನು ವಶಪಡಿಸಿಕೊಂಡರೆ, ಹೆಂಜೆ ನಾಯ್ಕ, ಗಿಡ್ಡ ಗಣೇಶ ಸೇರಿಕೊಂಡು ಬನವಾಸಿಯ ಬ್ರಿಟೀಷ ಗೋದಾಮುಗಳನ್ನು ಕೊಳ್ಳೆಹೊಡೆಯುತ್ತಾರೆ. ಇದೇ ವೇಳೆಗೆ ಬಿಳಗಿಯ ಯವರಾಜ ತನ್ನ ಸ್ವಾತಂತ್ರ್ಯವನ್ನು ಘೋಷಿಸಿಕೊಳ್ಳುತ್ತಾನೆ.
‘ಧೋಂಡಿಯಾ ವಾಘ’ನ ಚರಿತ್ರೆಯ ಅಧ್ಯಯನದ ಸಂದರ್ಭದಲ್ಲಿ ಸಮಕಾಲೀನ ಉತ್ತರ ಕನ್ನಡ ಜಿಲ್ಲೆಯ ಸ್ಥಿತಿ-ಗತಿಗಳನ್ನು ಅವಲೋಕಿಸುವುದು ಅವಶ್ಯಕ. ಕ್ರಿ.ಶ. 1764ರಲ್ಲಿ ‘ಹೈದರ ಅಲಿ’ಯು ಸೋದೆ ರಾಜ್ಯದ ಮೇಲೆ ದಾಳಿಮಾಡುತ್ತಾನೆ. ಸೋದೆ ಅರಸರು ಹೈದರಾಲಿಯ ದಾಳಿಯನ್ನು ಎದುರಿಸಲಾಗದೇ ಗೋವೆಗೆ ಪಲಾಯನಗೈದು ಪೋರ್ಚುಗೀಸರ ಆಶ್ರಯ ಪಡೆಯುತ್ತಾರೆ. ಈ ವೇಳೆಗೆ ಸಂಪೂರ್ಣ ಕೆನರಾ ಜಿಲ್ಲೆ ಹೈದರನ ವಶಗಾಗಿ ಮುಂದೆ ಆತನ ಮಗ ಟಿಪ್ಪೂವಿನ ವಶವಾಗುತ್ತದೆ. ಈ ವೇಳೆಗೆ ಭತ್ತ, ಅಡಿಕೆ, ತೆಂಗು ಮತ್ತು ಮೆಣಸಿನ ಕಾಳು ವ್ಯಾಪಾರದಿಂದಾಗಿ ಸಮೃದ್ಧವಾದ ಈ ಜಿಲ್ಲೆಯಲ್ಲಿ ಹೈದರನಾಗಲೀ, ಟಿಪ್ಪೂವಾಗಲೀ ಯಾವುದೇ ಆಡಳಿತ ಸುಧಾರಣೆಗಳನ್ನು ಕೈಗೊಳ್ಳದೇ ಕೇವಲ ಆದಾಯದ ಮೂಲವನ್ನಾಗಿಸಿಕೊಂಡು ಈ ಭಾಗದ ಮೇಲೆ ಅಸಹನೀಯ ಕರ ವಿಧಿಸುತ್ತಾರೆ. ಇದೇ ವೇಳೆ ಕೊಲ್ಲಾಪುರದ ಕಡೆಯಿಂದ ಮರಾಠರು ಆಗಾಗ ದಾಳಿ ಮಾಡಿ ಕೊಳ್ಳೆಹೊಡೆದು ಹೋಗುತಿದ್ದರು. ಮರಾಠರನ್ನಾಗಲಿ, ಹೈದರ ಟಿಪ್ಪೂವನ್ನಾಗಲಿ ಎದುರಿಸುವ ಪ್ರಭಲ ರಾಜಸತ್ತೆ ಕೆನರಾ ಜಿಲ್ಲೆಯಲ್ಲಿ ಅಂದರೆ ಉತ್ತರ ಕನ್ನಡದ ಭಾಗದಲ್ಲಿ ಇರಲಿಲ್ಲ. ಟಿಪ್ಪೂವಿನ ಸಿಕ್ಕಾಪಟ್ಟೆ ಕಂದಾಯದಿಂದ, ಮರಾಠರ ದಾಳಿಗಳಿಂದ ಸಾವಿರಾರು ರೈತರು ನಿಂತ ನೆಲದಲ್ಲೇ ನಿರ್ಗತಿಕರಾದರು. ಕೆಲವರು ಹತಾಶರಾಗಿ ಭೂಮಿ ಬಿಟ್ಟುಕೊಟ್ಟರು. ಬಹುತೇಕ ವ್ಯವಸಾಯದ ಭೂಮಿಗಳೆಲ್ಲ ಪಾಳುಬಿದ್ದವು. ಜನರಲ್ಲಿ ಅಸಮಾಧಾನದ ನೋವಿನ ಕಿಚ್ಚು ಆಸ್ಫೋಟಿಸುವ ಸನ್ನಾಹದಲ್ಲಿದ್ದಿತ್ತು. ಇಂಥ ವಿಷಮ ಪರಿಸ್ಥಿತಿಯಲ್ಲಿ ಅನಾಯಕತ್ವದ ದುರ್ದಶೆಯಿಂದ ಜರ್ಜರಿತವಾದ ಒಂದು ವರ್ಗದ ಜನತೆಯ ಆಕಾಂಕ್ಷೆಯ ರೂಪವೆನ್ನುವಂತೆ ಧೋಂಡಿಯಾ ವಾಘ ಜಿಲ್ಲೆಯನ್ನು ಪ್ರವೇಶಿಸುತ್ತಾನೆ. ಹೆಂಜೆ ನಾಯ್ಕ ಆತನ ಆತ್ಮೀಯ ಗೆಳೆಯನಾಗಿ ಕಾರವಾರ, ಅಂಕೋಲಾ, ಸುಪಾ, ಯಲ್ಲ್ಲಾಪುರ ಭಾಗಗಳಲ್ಲಿ ಅಧಿಕಾರಷಾಹಿಯ ವಿರುದ್ಧ ಕಾರ್ಯೋನ್ಮುಖನಾದ. ದುಡಿಯುವ ವರ್ಗದ ಶೋಷಿತರು ಇವರ ಬೆಂಬಲಿಗರಾದರು.
ಧೋಂಡಿಯಾ ವಾಘನ ಕಾರ್ಯಾಚರಣೆಗಳು ಎಷ್ಟು ಪ್ರಭಲವಾಯಿತೆಂದರೆ ಬ್ರಿಟಿಷರು ಅವನನ್ನು ಎದುರಿಸಲು ನೆಪೂಲಿಯನ್ನನ ವಿರುದ್ಧ ವಾಟರಲೂವಿನಲ್ಲಿ ಯುದ್ಧಮಾಡಿ ಗೆÀದ್ದ ವೆಲಿಂಗ್ಟನ್ನಿನ ಡ್ಯೂಕ ಆದ ಅರ್ಥರ್ ವೆಲ್ಲೆಸ್ಲಿಯ ನೇತೃತ್ವದ ಸೈನ್ಯ ಕಳುಹಿಸಿದರು. ಮರಾಠರ ಮತ್ತು ಆಂಗ್ಲರ ನಡುವೆ ಒಳ ಒಪ್ಪಂದವಾಗಿ ವೆಲ್ಲೆಸ್ಲಿಯ ಪಡೆಗಳು ವರದಾ ನದಿಯನ್ನು ದಾಟಿ ವಾಘನ ಮೇಲೆ ದಾಳಿಮಾಡುವುದೆಂದೂ, ಅದೇ ವೇಳೆ ಮಲಪ್ರಭಾ ನದಿಯನ್ನು ದಾಟಿ ಗೋಖ್ಲೆ ನೇತೃತ್ವದ ಮರಾಠಾ ಸೇನೆ ಉತ್ತರದಿಂದ ದಾಳಿ ಮಾಡುವುದೆಂದೂ ರಣತಂತ್ರ ರಚಿಸಲಾಯಿತು. ಒಪ್ಪಂದದಂತೆ ಸಮಯಕ್ಕೆ ಸರಿಯಾಗಿ ಗೋಖ್ಲೆಯ ಸಹಾಯಕ್ಕೆ ಮೂರು ಬಾಂಬೆ ಬೆಟಾಲಿಯನ್‍ಗಳಾಗಲಿ ದಕ್ಷಿಣದಿಂದ ವೆಲ್ಲೆಸ್ಲಿಯ ಪಡೆಗಳಾಗಲಿ ಬರಲಿಲ್ಲ. ಹತ್ತು ಸಾವಿರ ಕುದುರೆ, ಐದು ಸಾವಿರ ಕಾಲ್ದಳ ಮತ್ತು ಎಂಟು ಫಿರಂಗಿಗಳೊಂದಿಗೆ ಸಾಗುತಿದ್ದ ಗೋಖ್ಲೆಯ ಮೇಲೆ ಕಿತ್ತೂರಿನ ಸಮೀಪ ಹಠಾತ್ ದಾಳಿಮಾಡಿದ ಧೋಂಡಿಯಾ ವಾಘ ಅವನನು ಕೊಂದುಹಾಕಿದ್ದ. ವರ್ಷದ ಹಿಂದಿನ ಸೋಲಿಗೆ ಸೇಡು ತೀರಿಸಿಕೊಂಡಿದ್ದ ವಾಘ ಸತ್ತು ಬಿದ್ದ ಗೋಖ್ಲೆÉಯ ಎದೆಯಿಂದ ಬಸಿದು ಬಂದ ರಕ್ತವನ್ನು ತನ್ನ ಮೀಸೆಗಳಿಗೆ ಬಳಿದುಕೊಂಡು ಸಂಭ್ರಮಿಸಿದನೆಂದು ಲಾವಣಿಗಳು ವರ್ಣಿಸಿವೆ. ವೆಲ್ಲೆಸ್ಲಿ ಆ ದಿನದ(ಜೂನ್ 30, 1800) ತನ್ನ ಅಸಹಾಯಕತೆಯನ್ನು ಕ್ಲೋಸ್‍ಗೆ ಬರೆದ ಪತ್ರದಲ್ಲಿ ಈ ರೀತಿ ತೋಡಿಕೊಂಡಿದ್ದಾನೆ- ‘ನನ್ನದು ಎಂಥ ದುಸ್ಥಿತಿ! ಆಹಾರ ಅಭಾವದಿಂದ ಮುಂದೆ ಸಾಗಲು ಆಗಲಿಲ್ಲ. ಸೈನಿಕರು ಆರೋಗ್ಯವಾಗಿ ಉತ್ಸಾಹದಿಂದಿದ್ದರೂ, ನಾನು ಇಲ್ಲಿಗೆ ಬರುವ ಮೊದಲೇ ಬಂದಿರಬೇಕಾಗಿದ್ದ ಆಹಾರ ಸಾಮಗ್ರಿಗಳ ಸರಬರಾಜುವಿನಲ್ಲದ ವ್ಯತ್ಯಯದಿಂದಾಗಿ ಎಲ್ಲವೂ ನಾಶವಾಗಿಹೋಯಿತು.’
ಧೋಂಡಿಯಾ ವಾಘ ವೆಲ್ಲೆಸ್ಲಿಗೆ ಸಮಸ್ಯೆಯಾಗಿ ಕಾಡತೊಡಗಿದ್ದ. ಧೋಂಡಿಯಾ ನೇರ ಯುದ್ಧಗಳಿಗಿಂತ ಗೇರಿಲ್ಲಾ ಯುದ್ಧಗಳನ್ನೇ ಹೆಚ್ಚಾಗಿಮಾಡುತಿದ್ದ. 1800ರ ಜುಲೈನಿಂದ ಸಪ್ಟೆಂಬರವರೆಗೆ ಉತ್ತರ ಕನ್ನಡ, ಬೆಳಗಾವಿ, ರಾಯಚೂರುಗಳಲ್ಲಿ ಧೋಂಡಿಯಾನ ಸೈನ್ಯ ಸತತವಾಗಿ ಬ್ರಿಟೀಷ್ ಶಿಬಿರಗಳ ಮೇಲೆ ದಾಳಿಮಾಡಿ ಲೂಟಿಮಾಡುತ್ತಿತ್ತು. ಧೋಂಡಿಯಾನನ್ನು ಸೆರೆ ಹಿಡಿದ ಮರುಕ್ಷಣದಲ್ಲೆ ಸಮೀಪದ ಮರಕ್ಕೆ ನೇಣುಹಾಕಿ ಕೊಲ್ಲಬೇಕೆಂದು ಗರ್ವನರ ಮಾರ್ಕಿಸ್ ಆಜ್ಞೆಮಾಡಿದ್ದ. ಧೋಂಡಿಯಾನನ್ನು ಹಿಡಿಯಲೇಬೇಂಕೆಂದು ಛಲತೊಟ್ಟ ವೆಲ್ಲೆಸ್ಲಿ ನಿರಂತರವಾಗಿ ಅವನ ಬೆನ್ನಟ್ಟಿದ್ದ. ಕ್ರಿ.ಶ. 1800ರ ಸೆಪ್ಟೆಂಬರ 10 ರಂದು ರಾಯಚೂರಿನ ಕೋಣಗಲ್ಲಿನಲ್ಲಿ ಧೋಂಡಿಯಾ ವಾಘ ಬ್ರಿಟಿಷರಿಗೆ ಸೋತುಹೋಗುತ್ತಾನೆ. ಆಂಗ್ಲ ಸೈನ್ಯ ಆತನನ್ನು ಕೊಂದುಹಾಕುತ್ತದೆ. ಹೀಗೆ ಕನ್ನಡ ನೆಲದಲ್ಲ್ಲಿ ನಡೆದ ದೌರ್ಜನ್ಯಗಳನ್ನು ಪ್ರತಿಭಟಿಸಿ ಎದೆಯುಬ್ಬಿಸಿ ನಿಂತ ವೀರ ವ್ಯಕ್ತಿತ್ವವೊಂದು ಚರಿತ್ರೆಯ ಪುಟ ಸೇರಿಕೊಂಡು ಬಿಟ್ಟಿತು. ‘ವಾಘ ಒಬ್ಬ ಸಮರ್ಥ ಹಾಗೂ ಬ್ರಿಟಿಷರಿಗೆ ದೊಡ್ಡ ಆತಂಕವಾಗಿದ್ದ’ ಎಂದು ವೆಲ್ಲೆಸ್ಲಿ ಹೇಳಿದ್ದಾನೆ. ಎಡ್ವರ್ಡ್ ಎನ್ನುವ ಇತಿಹಾಸಕಾರ ‘ವಾಘನ ಮುನ್ನುಗ್ಗುವಿಕೆ ಮತ್ತು ಸೈನ್ಯ ಶಕ್ತಿಗಳನ್ನು ಬ್ರಿಟಿಷರು ಸಮಯಕ್ಕೆ ಸರಿಯಾಗಿ ಬ್ರಿಟಿಷರು ಅಡಗಿಸದೇ ಹೋಗಿದ್ದರೆ ಇವನು ಎರಡನೆಯ ಹೈದರ ಅಲಿ ಆಗಿಬಿಡುತಿದ್ದ’ ಎಂದು ಅಭಿಪ್ರಾಯಿಸಿದ್ದಾನೆ.
‘ಧೋಂಡಿಯಾ ವಾಘ’ನಿಗೆ ಬ್ರಿಟಿಷ ವಿರುದ್ಧ ಹೋರಾಡಿದ ಯೋಧರಲ್ಲೇ ವಿಶೇಷ ಸ್ಥಾನವಿದೆ. ಆದರೆ ನಾವು ಅಭ್ಯಸಿಸುವ, ನಮಗೆ ಭೋಧಿಸುವ ಚರಿತ್ರೆಯ ಪಠ್ಯದಲ್ಲಿ ಧೋಂಡಿಯಾ ವಾಘನಿಗೆ ಯಾವ ಪ್ರಾಮುಖ್ಯತೆಯೂ ಇಲ್ಲ. ಇದು ಇತಿಹಾಸದ ನಿರ್ಲಕ್ಷ. ಆವರೆಗೆ ಹೋರಾಡಿದ ಎಲ್ಲರೂ ತಮ್ಮ ತಮ್ಮ ರಾಜ್ಯದ ಉಳಿವಿಗಾಗಿ ಪ್ರತಿಭಟಿಸಿದ ರಾಜರು. ಮುಂದೆ ಹೋರಾಡಿದ ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಇವರೆಲ್ಲರೂ ತಮ್ಮ ಸಂಸ್ಥಾನಗಳಿಗಾಗಿಯೇ ಬ್ರಿಟಿಷರನ್ನು ವಿರೋಧಿಸಿದವರು, ಆದರೆ ವಾಘ ಒಂದು ಸಾಮಾನ್ಯ ಬಡ ಕುಟುಂಬದಿಂದ ಬಂದ ತನ್ನ ಬದುಕಿನುದ್ದಕ್ಕೂ ಸಾಮಾಜಿಕ ನ್ಯಾಯದ ಪ್ರಶ್ನೆಯನ್ನೇ ಮುಂದಿಟ್ಟುಕೊಂಡು ಹೋರಾಡಿದವ. ತನ್ನದೆಂಬ ಯಾವ ರಾಜ್ಯವನ್ನು ಹೊಂದಿರದ ಆತ ಬ್ರಿಟಿಷರಿಂದ ತೀವ್ರ ಶೋಷಣೆಗೊಳಗಾದ ಸಮಾಜದ ಕೆಳಸ್ಥರದ ದುಡಿಯುವ ವರ್ಗದ ಪರವಾಗಿ ಧ್ವನಿಎತ್ತಿದವ. ಮುಂದೆ ರಾಜಮಹಾರಾಜರುಗಳಲ್ಲದೇ ಜನ ಸಮಾನ್ಯರೂ ಹೋರಾಡಲು ಮುಂದಡಿಯಿಡಲು ಕಾರಣನಾದವ. ಸಾವಿರಾರು ಹಳ್ಳಿಗರು ಸರಕಾರದ ವಿರುದ್ಧವಾಗಿ ಶಸ್ತ್ರ ಹಿಡಿದು ಸಜ್ಜಾಗುವಂತೆ ಮಾಡಿದ ಮೂಲ ಪುರುಷ. ಮುಂದೆ ಹೊಸದಾಗಿ ಜಾರಿಗೆ ಬಂದ ಕಂದಾಯ ಜಮೀನಿನ ಒಡೆತನದ ಪದ್ಧತಿಗಳಿಂದ ಕೆರಳಿದ ರೈತರು 1830ರ ದಶಕದಲ್ಲಿ ತೀವ್ರವಾದ ದಂಗೆಗಳನ್ನು ನಡೆಸಿದರು. ಕರಾವಳಿಯಲ್ಲಿ ನಡೆದ ಈ ರೈತದಂಗೆಗಳಿಗೆ ಇಂಗ್ಲೀಷ ದಾಖಲೆಗಳು`ಕೆನರಾ ಬಂಡಾಯ’ವೆಂದು ಕರೆದಿವೆ. ಆ ಸಮಯದಲ್ಲಿ ಕಮಿಶನರ್ ಆಗಿದ್ದ ಮಾರ್ಕ ಕಬ್ಬನ್ ತನ್ನ ಟಿಪ್ಪಣಿಯಲ್ಲಿ “ಅವರ ಗುರಿ ಬ್ರಿಟಿಷ್ ಅಧಿಕಾರವನ್ನು ಕಿತ್ತೊಗೆದು ತಮ್ಮದನ್ನು ಸ್ಥಾಪಿಸುವುದೇ ಆಗಿತ್ತು ಹೊರತು ಜನರನ್ನು ಕೊಳ್ಳೆ ಹೊಡೆಯುವುದಲ್ಲ. ಅವರು ಸರಕಾರಿ ಖಜಾನೆಗಳನ್ನು ದೋಚಿದರೇ ಹೊರತು ಊರು, ಹಳ್ಳಿಗಳನ್ನಲ್ಲ…” ಎಂದು ಬರೆದಿದ್ದಾನೆ.
ಧೋಂಡಿಯಾ ವಾಘ ಬ್ರ್ರಿಟಿಷ ಅಧಿಕಾರಿಗಳ ದರ್ಪ ದುಂಡಾವೃತ್ತಿಗಳ ವಿರುದ್ಧ ವಿರೋಧ ಎಬ್ಬಿಸಿದ ಮೊದಲಿಗ. ಧಾಡಸಿ ಇತಿಹಾಸ ಚಿಂತನೆ ಹಾಗೂ ಧಾಟು ವಿಚಾರಗಳ ಫಲವಾಗಿ ಇಂಥ ಒಬ್ಬ ವೀರ ಸೇನಾನಿಯನ್ನು ನಾವಿಂದು ಮರೆತಿರುವುದು ದುರದೃಷ್ಟಕರ.
ಚಿತ್ರ ಸಂಖ್ಯೆ 1 ಧೊಂಡಿಯವಾಘ್ ಶಿಕಾರಿಪುರದ ಹುಚ್ಚರಾಯಸ್ವಾಮಿಗೆ ಅರ್ಪಿಸಿದ್ದ ಆತನ ಖಡ್ಗ. ಚಿತ್ರ ಸಂಖ್ಯೆ 2 ಕೋಣಗಲ್ಲಿನ ರಣಭೂಮಿಯಲ್ಲಿ ಧೋಂಡಿಯಾ ವಾಘ ಸೋತು ಸತ್ತ ಕ್ಷಣ. ಚಿತ್ರ ಸಂಖ್ಯೆ 3 ಧೋಂಡಿಯಾ ವಾಘನ ಕಾಲ್ಪನಿಕ ಚಿತ್ರ.




ಮಾಹಿತಿ: ಶ್ಯಾಮಸುಂದರ ಗೌಡ


Leave a Reply